ಕಡಬ ಟೈಮ್ಸ್ (KADABA TIMES):ಕಡಬ ತಾಲೂಕಿನ ಕಾಣಿಯೂರು ಮಠದ ಜಂಕ್ಷನ್‌ನಿಂದ ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದ ಮೂಲಕ ಹಾದು ಹೋಗುವ ಪ್ರಗತಿ ವಿದ್ಯಾಸಂಸ್ಥೆಯವರೆಗೆ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಲು ಶಾಸಕ ಎಸ್. ಅಂಗಾರರ ಉಪಸ್ಥಿತಿಯಲ್ಲಿ ಗುದ್ದಲಿ ಪೂಜೆ ನಡೆದು ಬರೋಬ್ಬರಿ ಒಂದು ವರ್ಷವಾದರೂ ಇದುವರೆಗೂ ಕಾಮಗಾರಿ ಆರಂಭವಾಗಿಲ್ಲ.
ಕಾಣಿಯೂರು – ನೀರಜರಿ- ಅಬೀರ ರಸ್ತೆಗೆ ಕಾಂಕ್ರಿಟೀಕರಣ ಕಾಮಗಾರಿಗೆಂದು ಕಳೆದ ಅಕ್ಟೋಬರ್ ತಿಂಗಳಲ್ಲಿ ಸುಳ್ಯ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದ್ದರು. ಕಾಣಿಯೂರು ಕೂಡುರಸ್ತೆಯಿಂದ ಪ್ರಗತಿ ವಿದ್ಯಾಸಂಸ್ಥೆಯವರೆಗೆ ಸುಮಾರು ೭೦೦ಮೀಟರ್ ರಸ್ತೆಯನ್ನು ಸಂಪೂರ್ಣ ಕಾಂಕ್ರಿಟೀಕರಣಕ್ಕೆ ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು, ಮುಂದಿನ ಹಂತವಾಗಿ ಪ್ರಗತಿ ವಿದ್ಯಾಸಂಸ್ಥೆಯಿಂದ ನೀರಜರಿ- ಅಬೀರ ರಸ್ತೆಗೆ ರೂ ಒಂದು ಕೋಟಿ ಅನುದಾನಕ್ಕೆ ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ.
ಅನುದಾನ ಬಿಡುಗಡೆಗೊಂಡ ತಕ್ಷಣ ಅಬೀರ- ನೀರಜರಿ- ಅಮೈ ಸಂಪರ್ಕ ರಸ್ತೆಯ ಕಾಮಗಾರಿಯನ್ನು ಮಾಡಲಾಗುತ್ತದೆ ಎಂಬ ಭರವಸೆಯನ್ನು ಸಂದರ್ಭದಲ್ಲಿ ಶಾಸಕರು ಹೇಳಿದ್ದರು. ಆದರೆ ಗುದ್ದಲಿ ಪೂಜೆ ನಡೆದು ಒಂದು ವರುಷವಾದರೂ ಕಾಮಗಾರಿ ಪ್ರಾರಂಭವಾಗಲೇ ಇಲ್ಲ.
ಈ ರಸ್ತೆಯು ಹದಗೆಟ್ಟು ಹೊಂಡ ಗುಂಡಿಗಳಿಂದ ಕೂಡಿರುವುದರಿಂದ ವಾಹನ ಸಂಚಾರಕ್ಕೆ ಮತ್ತು ಪಾದಚಾರಿಗಳು ನಡೆದುಕೊಂಡು ಹೋಗಲು ಸಾಧ್ಯವಾಗದ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಕೆಸರು ನೀರು, ಬೇಸಗೆಯಲ್ಲಿ ಧೂಳಿನ ಕಿರಿಕಿರಿ ಇಲ್ಲಿನ ಸಾರ್ವಜನಿಕರಿಗೆ ತಪ್ಪಿದಲ್ಲ.ಈ ವಿಚಾರವಾಗಿ ಸಾರ್ವಜನಿಕರು ಬೇಸತ್ತು ಕಾಮಗಾರಿ ಶೀಘ್ರವಾಗಿ ನಡೆಸಲು ಆಗ್ರಹಿಸುತ್ತಿದ್ದಾರೆ.
ಶಾಸಕರು ಏನು ಹೇಳುತ್ತಾರೆ?: ಈ ರಸ್ತೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡಿದೆ. ಗುದ್ದಲಿ ಪೂಜೆ ನಡೆದಿರುವುದು ಹೌದು, ಆದರೆ ಕಾರಣಾಂತರಗಳಿಂದ ಕಾಮಗಾರಿ ಮುಂದುವರಿದಿಲ್ಲ. ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು. -ಎಸ್.ಅಂಗಾರ ಶಾಸಕರು, ಸುಳ್ಯ
ಮಾದ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಗತಿ ವಿದ್ಯಾಸಂಸ್ಥೆಯ ಸದಸ್ಯ ದೇವಿಕಿರಣ್ ರೈ ಮಾದೋಡಿ ಅವರು ಗುದ್ದಲಿ ಪೂಜೆ ನಡೆದು ಒಂದು ವರ್ಷವಾದರೂ ಕಾಮಗಾರಿ ನಡೆಯದೇ ಇರುವುದು ತುಂಬಾ ಬೇಸರದ ವಿಚಾರ. ಈ ರಸ್ತೆ ಎರಡು ಮೂರು ಗ್ರಾಮಗಳಿಗೆ ಸಂಬಂಧಪಟ್ಟ ರಸ್ತೆಯಾಗಿದ್ದು, ಜನರು ಮೂಲಭೂತ ಸೌಕರ್ಯವನ್ನು ಪಡೆಯಲು ಇದೇ ರಸ್ತೆಯಾಗಿರುತ್ತದೆ. ನಾವು ಈ ಬಗ್ಗೆ ರಸ್ತೆ ಗುತ್ತಿಗೆದಾರರಲ್ಲಿ ವಿಚಾರಿಸಿದಾಗ ಟೆಂಡರ್ ಆಗಲಿಲ್ಲ, ಅದಕ್ಕೆ ಅನುದಾನವೇ ಬರಲಿಲ್ಲ, ವರ್ಕ್ ಆರ್ಡರ್ ಸಿಗಲಿಲ್ಲ ಎಂಬುದಾಗಿ ದೂರವಾಣಿ ಮುಖಾಂತರ ಅವರನ್ನು ಸಂಪರ್ಕಿಸಿದಾಗ ಇದನ್ನೇ ಉತ್ತರ ನೀಡಿರುತ್ತಾರೆ ಎಂದಿದ್ದಾರೆ.


