ಕಡಬ: ಗ್ರಾಮಸ್ಥರೇ ಸೇರಿಕೊಂಡು ಕುಮಾರಧಾರಾ ನದಿ ಮೂಲಕ ನಿರ್ಮಿಸಿದ ತಾತ್ಕಾಲಿಕ ಸೇತುವೆ ಎರಡೇ ತಿಂಗಳಲ್ಲಿ ನೀರುಪಾಲು

ಕಡಬ: ಗ್ರಾಮಸ್ಥರೇ ಸೇರಿಕೊಂಡು ಕುಮಾರಧಾರಾ ನದಿ ಮೂಲಕ ನಿರ್ಮಿಸಿದ ತಾತ್ಕಾಲಿಕ ಸೇತುವೆ ಎರಡೇ ತಿಂಗಳಲ್ಲಿ ನೀರುಪಾಲು

Kadaba Times News
0

 ಕಡಬ ಟೈಮ್ಸ್ (KADABA TIMES):  ಇಲ್ಲಿನ ಕೋಡಿಂಬಾಳ ಮತ್ತು ಕೇನ್ಯ ಗ್ರಾಮಗಳ ನಡುವೆ ಹರಿಯುತ್ತಿರುವ ಕುಮಾರಧಾರಾ ನದಿಗೆ ಮಜ್ಜಾರು ಕಡವು  ಎಂಬಲ್ಲಿ ಬೇಸಿಗೆ ಕಾಲದಲ್ಲಿ ಮಾತ್ರ ಉಪಯೋಗಿಸಲು  ಗ್ರಾಮಸ್ಥರೇ ಸೇರಿಕೊಂಡು ಶ್ರಮದಾನದ ಮೂಲಕ ನಿರ್ಮಿಸಿರುವ ತಾತ್ಕಾಲಿಕ  ಸೇತುವೆ  ಪೂರ್ಣ ನೀರುಪಾಲಾಗಿದೆ.

ಗ್ರಾಮಸ್ಥರೇ ನಿರ್ಮಿಸಿದ ಸೇತುವೆ ನೀರುಪಾಲಾಗಿರುವುದು(KADABA TIMES)


ಇತ್ತೀಚೆಗೆ ಕುಮಾರಪರ್ವತ ತಪ್ಪಲಿನ ಘಟ್ಟ ಪ್ರದೇಶದಲ್ಲಿ   ನಿರಂತರ ಮಳೆಯಾದ ಕಾರಣ  ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿತ್ತು. ಹೀಗಾಗಿ ನದಿ ಮೂಲಕ ನಿರ್ಮಿಸಿದ್ದ ಈ ಸೇತುವೆ ಸಹಜವಾಗಿ ಮುಳುಗಡೆಯಾಗಿತ್ತು . ಹೀಗಾಗಿ ಮುಂಜಾಗೃತಾ ಕ್ರಮವಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದೀಗ ಕೆಲ ದಿನಗಳಿಂದ ನೀರಿನ ಹರಿವು ಹೆಚ್ಚಳವಾಗಿದ್ದು  ತಾತ್ಕಾಲಿಕ ಸೇತುವೆ ಪೂರ್ಣ  ಮುಳುಗಡೆಗೊಂಡು  ನೀರಿನಲ್ಲಿ ಕೊಚ್ಚಿ ಹೋಗಿದೆ .


ತಾತ್ಕಾಲಿಕ ಸೇತುವೆ ನಿರ್ಮಾಣ ಸಮಿತಿ ರಚಿಸಿ ಗ್ರಾಮಸ್ಥರ ಸಹಕಾರ ಪಡೆದು ದೇಣಿಗೆ ಸಂಗ್ರಹಿಸಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಕಲ್ಲು ಮಣ್ಣು ಮರಳು ಮತ್ತು ಸುಮಾರು 22 ಸಿಮೆಂಟ್ ಪೈಪು ಮುಂತಾದ ಪರಿಕರಗಳನ್ನು ಬಳಸಿ ಬೇಸಗೆಯಲ್ಲಿ ಮಾತ್ರ ಉಪಯೋಗಕ್ಕೆ ಬರುವ ಸುಮಾರು 200 ಮೀ. ಉದ್ದದ ತಾತ್ಕಾಲಿಕ ಸೇತುವೆ ನಿರ್ಮಾಣವಾಗಿತ್ತು. ಕಳೆದ ಮಾ. 23ರಂದು  ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಸೇತುವೆ ಉದ್ಘಾಟನೆ ಮಾಡಿದ್ದರು.


ಮಳೆಗಾಲಕ್ಕೆ ಈ ರಸ್ತೆ ಉಪಯೋಗ ಮಾಡುವಾಗಿಲ್ಲ,  ಹಾಗಾಗಿ ಇಲ್ಲೊಂದು ಸರ್ವ ಋತು ಸೇತುವೆ ಬೇಕೆಂದು ಹೋರಾಟ ಸಮಿತಿ ಮೂಲಕ  ಸುಳ್ಯ ಶಾಸಕಿಯವರಲ್ಲಿ ಸರ್ಕಾರಕ್ಕೆ  ಹಕ್ಕೊತ್ತಾಯ ಮಾಡಿದ್ದರು ಉದ್ಘಾಟನೆಯಾದ ಬಳಿಕ ಬಳ್ಪ, ಕೇನ್ಯ, ಮಜ್ಜಾರು ಭಾಗದ ಜನರು ಹೆಚ್ಚು ಬಳಕೆ ಮಾಡುತ್ತಿದ್ದರು.   


ಬಳ್ಪ ಮತ್ತು ಕೇನ್ಯ ಗ್ರಾಮಸ್ಥರು ಆಸ್ಪತ್ರೆ, ತಾಲೂಕು ಕಚೇರಿ, ವ್ಯಾಪಾರ ವ್ಯವಹಾರ, ಶಾಲಾ ಕಾಲೇಜು ಸೇರಿದಂತೆ ತಮ್ಮ ಅಗತ್ಯತೆಗಳಿಗಾಗಿ ತಾಲೂಕು ಕೇಂದ್ರ ಕಡಬವನ್ನು ಸಂಪರ್ಕಿಸಬೇಕಾದರೆ ಸುಳ್ಯ ತಾಲೂಕಿನ ಪಂಜ ಮೂಲಕ ಸುಮಾರು 20ಕಿ.ಮೀ. ಸುತ್ತುಬಳಸಿ ಸಂಚರಿಸಬೇಕು .  ಆದರೆ ತಮ್ಮ ಗ್ರಾಮದಲ್ಲಿ ಹರಿಯುತ್ತಿರುವ ಕುಮಾರಧಾರಾ ನದಿಯನ್ನು  ದಾಟಿ ಕೇವಲ 6 ಕಿ.ಮೀ. ಕ್ರಮಿಸಿದರೆ ಕಡಬ ತಾಲೂಕು ಕೇಂದ್ರವನ್ನು ಮತ್ತು 3 ಕಿ.ಮೀ ಸಂಚರಿಸಿದರೆ  ಮಂಗಳೂರು -ಬೆಂಗಳೂರು ನಡುವಿನ ಕೋಡಿಂಬಾಳ ರೈಲು ನಿಲ್ದಾಣವನ್ನು ತಲುಪಲು ಸಾಧ್ಯವಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top