ಕಡಬ ಟೈಮ್ಸ್ ,ಪ್ರಮುಖ ಸುದ್ದಿ : ಕಡಬ : ಸಂಪೂರ್ಣ ನಾದುರಸ್ತಿ ಸ್ಥಿತಿಯಲ್ಲಿರುವ ಕಡಬ-ಪಂಜ ಮುಖ್ಯ ರಸ್ತೆಯ ಪರಿಸ್ಥಿತಿ ಮಳೆ ಸುರಿದ ಬಳಿಕ ಇನ್ನಷ್ಟು ಹದಗೆಟ್ಟಿದೆ .ಹೊಂಡ,ಗುಂಡಿಯ ಕೆಸರು ತುಂಬಿದ ರಸ್ತೆಯಲ್ಲೇ ವಾಹನ ಸವಾರರು ಸಂಚಾರ ಮಾಡುತ್ತಿದ್ದು ದುಸ್ತರವೆನಿಸಿದೆ. ಅದರಲ್ಲೂ ಕಡಬ ಪಟ್ಟಣ ಪಂಚಾಯತ್ ಚುನಾವಣೆ ಘೋಷಣೆ ಬನ್ನಲ್ಲೇ ರಾಜಕೀಯ ಆಯಾಮ ಪಡೆದುಕೊಳ್ಳುತ್ತಿದೆ. ಎರಡು ತಿಂಗಳ ಬಳಿಕ ಅಂದರೆ ಸೆಪ್ಟಂಬರ್ ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ.
ಸದ್ಯ
ಈ ರಸ್ತೆ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚಿತ
ವಿಷಯವಾಗಿದ್ದು ಮುಂದುವರಿದು ಈ ರಸ್ತೆಯಲ್ಲಿ ಅನಾಮಿಕರು ಎಚ್ಚರಿಕೆಯ ಫ್ಲೆಕ್ಸ್ ಮರವೊಂದಕ್ಕೆ ಕಟ್ಟಿದ್ದಾರೆ . ಇದನ್ನು ಬಿಜೆಪಿ ಬೆಂಬಲಿಗರು ಹೆಚ್ಚು ಹಂಚಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನವರು ಇದನ್ನು ನೋಡಿ ಮೌನವಹಿಸಿದ್ದಾರೆ. ಇದರಲ್ಲಿ “ಚಂದ್ರಲೋಕದ
ಮೇಲ್ಮೈ ಲಕ್ಷಣ ಗಳನ್ನು ಭೂಮಿ ಮೇಲೆ ಸೃಷ್ಟಿಸುವ ಆಸಕ್ತಿಯನ್ನು ಹೊಂದಿರುವ ನಮ್ಮ ಘನವೆತ್ತ ರಾಜ್ಯ ಸರ್ಕಾರ ಕಡಬದಿಂದ ಕೋಡಿಂಬಾಳ ರಸ್ತೆಯನ್ನು
ಆಯ್ಕೆ ಮಾಡಿದೆ. ಹಾಗಾಗಿ ಸಂಚರಿಸುವವರು ರಸ್ತೆಯನ್ನು ಆನಂದಿಸಿ ಸೌದರ್ಯವನ್ನು ಆಸ್ವಾದಿಸಿ ಜಾಗರುಕತೆಯಿಂದ
ನಿಧಾನವಾಗಿ ಚಲಿಸಿ”ಎಂದು ವಿಡಂಬಿಸಿ ಬರೆಯಲಾಗಿದೆ.
ವಾಸ್ತವದಲ್ಲಿ
ಈ ರಸ್ತೆ ದುರಸ್ತಿಗೆ ಈಗಾಗಲೇ ಸುಳ್ಯ ಶಾಸಕೀಯ ಪ್ರಸ್ತಾವನೆ ಮೇರೆಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಆಯವ್ಯಯ ಯೋಜನೆಯಡಿ 1 ಕೋಟಿ ರೂ. ಅನುದಾನ ಈಗಾಗಲೇ ಬಿಡುಗಡೆಗೊಂಡಿದೆ. ಇದರ ಬೆನ್ನಲ್ಲೇ
ಬೆಂಗಳೂರು ಮೂಲದ ಗುತ್ತಿಗೆದಾರರಿಗೆ ಲೋಕೋಪಯೋಗಿ ಇಲಾಖೆ ಗುತ್ತಿಗೆಯನ್ನುವಹಿಸಿ ಒಂಭತ್ತು ತಿಂಗಳಲ್ಲಿ ಕೆಲಸ ಮುಗಿಸುವಂತೆ ಸೂಚಿಸಿ ಕಳೆದ ಎಪ್ರಿಲ್
21 ರಂದೇ ಅಧಿಕೃತ ಆದೇಶ ನೀಡಿದೆ. ಅಲ್ಲದೆ ಪ್ರತೀ ತಿಂಗಳು 8,26,528 ರೂ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿರಬೇಕೆಂದು ಸೂಚಿಸಲಾಗಿದೆ. ಈ ಬಗ್ಗೆ ಕಡಬ ಟೈಮ್ಸ್ ಕಲೆ ಹಾಕಿದ ದಾಖಲೆ ಇಲ್ಲಿದೆ.
ಶಾಸಕಿಯವರು ಗುದ್ದಲಿ ಪೂಜೆ ನೆರವೇರಿಸಿ ಮೂರು ತಿಂಗಳು ಒಂದು ಕಳೆದರೂ ಗುತ್ತಿಗೆದಾರ ಮಾತ್ರ ಇನ್ನೂ ನಿಗದಿತ ಕಾಮಗಾರಿ ಆರಂಭಿಸಲೇ ಇಲ್ಲ. ಇತ್ತೀಚೆಗೆ ಕಡಬಕ್ಕೆ ಆಗಮಿಸಿದ್ದ ಸುಳ್ಯ ಕ್ಷೇತ್ರದ ಶಾಸಕಿಯವರನ್ನು ಭೇಟಿ ಮಾಡಿದ ಆಟೋ ಚಾಲಕ ಮಾಲಕ ಸಂಘದ ಪ್ರತಿನಿಧಿಗಳು ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಗೊಳ್ಳದಿರುವ ಬಗ್ಗೆ ಪ್ರಶ್ನಿಸಿದಾಗ ಗುತ್ತಿಗೆದಾರರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಶಾಸಕಿ ಕೂಡಲೇ ಕಾಮಗಾರಿ ಆರಂಭಿಸುವಂತೆ ಸೂಚಿಸಿದರು. ಕೆಲ ದಿನಗಳ ಬಳಿಕ ಅಂದರೆ ಮೇ.22 ರಂದು ಮಳೆಯ ನಡುವೆಯೂ ಗುಂಡಿಗಳಿಗೆ ಜಲ್ಲಿ ಹಾಕುವ ಕಾರ್ಯ ನಡೆದಿತ್ತು. ಆದರೆ ನಿರಂತರ ಮಳೆಯಿಂದ ಈ ರಸ್ತೆ ಕಾಮಗಾರಿ ಆರಂಭವಾಗಲಿಲ್ಲ. ಇದೇ ಕಾರಣವನ್ನು ನೆಪವಾಗಿ ಇಟ್ಟುಕೊಂಡು ಗುತ್ತಿಗೆದಾರರು ಯಾವುದೇ ಪೂರ್ವ ಭಾವಿ ಕೆಲಸಕ್ಕೂ ಮುಂದಾಗಿಲ್ಲ. ಹಾಕಿರುವ ಜಲ್ಲಿಗಳು ರಸ್ತೆಗುಂಡಿಗಳಿಂದ ಎದ್ದು ಹೋಗಿ ವಾಹನ ಸವಾರರಿಗೆ ತೊಂದರೆಯಾಗಿದೆ.
ಅನುದಾನ ಬಂದ ನಂತರವೂ ಕಾಮಗಾರಿ ಆರಂಭವಾಗದೆ ನಿಂತಿರುವುದು ವಿಪರ್ಯಾಸವಾಗಿದೆ.ಗುತ್ತಿಗೆದಾರರು ಕಾಮಗಾರಿಯನ್ನು ಆರಂಭಿಸದೆ ಇರಲು ಕಾರಣವೇನು ಎಂಬುದನ್ನು ಪ್ರಶ್ನಿಸುವ ಜವಾಬ್ದಾರಿಯು ಜನಪ್ರತಿನಿಧಿಗಳಿಗೆ ಇದೆ. ಕೇವಲ ಉದ್ಘಾಟನೆ, ಭೂಮಿ ಪೂಜೆ, ಹಾಗೂ ಫೋಟೋ ಸೆಷನ್‌ಗಳಿಗೆ ಮಿತವಾಗಿದರೆ ಪರಿಸ್ಥಿತಿ ಹೀಗೆ ಬರಬಹುದು. ಈ ಕೆಲಸದ ನಿರ್ವಹಣೆ ಮತ್ತು ನಿಗಾವಹಿಸುವ ಜವಾಬ್ದಾರಿ ಕೂಡ ತಾಲೂಕಿನ ಶಾಸಕರ ಮೇಲಿದೆ. ಅನುದಾನ ಬಂದರೂ ಕೆಲಸವನ್ನು ಗುತ್ತಿಗೆದಾರರಿಂದ ಮಾಡಿಸಲು ಆಗುವುದಿಲ್ಲವೆ?, ಕೆಲಸ ಮಾಡದಿದ್ದರೆ ಗುತ್ತಿಗೆದಾರರನ್ನು ಬದಲಾಯಿಸುವ,ಅನುದಾನ ತಡೆಹಿಡಿಯುವ ಎಲ್ಲಾ ಅವಕಾಶ ಶಾಸಕರಿಗೆ ಇದೆಯಲ್ವೆ? ಎಂದು ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಲ್ಲದೆ ಸರ್ಕಾರದಿಂದ ಅನುದಾನ ಬಿಡುಗಡೆಯಾದ ಬಳಿಕ ಅದನ್ನು ಜನರ ಬೇಡಿಕೆಯಂತೆ ತ್ವರಿತವಾಗಿ ನಿರ್ವಹಿಸುವುದು ಶಾಸಕಿಯ ಕರ್ತವ್ಯವೂ ಆಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿದೆ.ಅಲ್ಲದೆ
ಈ ಹಿಂದೆ ರಸ್ತೆಗೆ ತೇಪೆ ಹಾಕುವ ಕಾಮಗಾರಿಗೆ ಮುಂದಾದಾಗ ರಸ್ತೆಯನ್ನು
ಪೂರ್ತಿಯಾಗಿ ಅಭಿವೃದ್ಧಿಪಡಿಸುವಂತೆ ಸ್ಥಳೀಯ ವಾಹನ ಚಾಲಕರು ಹಾಗೂ ಸಾರ್ವಜನಿಕರು ಆಗ್ರಹಿಸಿ ತೇಪೆ
ಕಾರ್ಯಕ್ಕೆ ವಿರೋಧವ್ಯಕ್ತಪಡಿಸಿದ್ದರು. ಗುಂಡಿಗಳಿಗೆ ಡಾಮಾರು ಹಾಕಿ ಮುಚ್ಚುವ ನೆಪದಲ್ಲಿ ಕಳಪೆ ತೇಪೆ
ಕಾರ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ ನಾಗರಿಕರು, ಸ್ಥಳಕ್ಕೆ ಗುತ್ತಿಗೆದಾರರು ಮತ್ತು ಇಂಜಿನಿಯರ್
ಬಂದ ಬಳಿಕವೇ ಸಮರ್ಪಕ ಕಾಮಗಾರಿ ನಡೆಸುವಂತೆ ಕಾರ್ಮಿಕರಿಗೆ ತಾಕೀತು ಮಾಡಿದರು.. ಆರಂಭದಲ್ಲಿ ಜಲ್ಲಿ
ಹಾಕಿ ರಸ್ತೆ ಗುಂಡಿಗಳನ್ನು ಮುಚ್ಚುವ ಯತ್ನ ಮಾಡಲಾಗಿತ್ತು. ಕಡಬ ಆಸ್ಪತ್ರೆ ಬಳಿ, ಮೆಸ್ಕಾಂ ಕಛೇರಿ ಬಳಿ, ಪೆಟ್ರೋಲ್
ಪಂಪ್ ಬಳಿ ರಸ್ತೆಯಲ್ಲಿ ಭಾರೀ ಪ್ರಮಾಣದ ಹೊಂಡಗಳಿದ್ದರೂ ಕಲ್ಲಂತಡ್ಕ ಬಳಿ ಸಣ್ಣ ಗುಂಡಿಗಳನ್ನು ಕಾರ್ಮಿಕರು
ಮುಚ್ಚುತ್ತಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಾಹನ ಸವಾರರು, ಸಾರ್ವಜನಿಕರು ಅಲ್ಲಿದ್ದವರನ್ನು
ತರಾಟೆಗೆ ತೆಗೆದುಕೊಂಡಿದ್ದರು. ಒಂದು ವೇಳೆ ಆಕ್ಷೇಪ ವ್ಯಕ್ತವಾಗದೆ ಇರುತ್ತಿದ್ದರೆ ಕನಿಷ್ಠ ಗುಂಡಿಗಳಿಗಾದರೂ ತಾತ್ಕಾಲಿಕ ಮುಕ್ತಿ ಸಿಗುತ್ತಿತ್ತು ಕೆಲ ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.






