ಕಡಬ ಟೈಮ್ಸ್, ಕಡಬ :ಕೊರೋನಾ ನಿಯಂತ್ರಿಸಲು ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ್ದು ಜಿಲ್ಲಾಡಳಿತ ಅಗತ್ಯ ಸಾಮಾಗ್ರಿ ಖರೀದಿಗೆ ನಿಗದಿ ಪಡಿಸಿ ಬಳಿಕ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿದೆ. ಆದ್ರೆ ಅಕ್ರಮ ಮರಳುಗಾರಿಕೆ ಮಾತ್ರ ಎಗ್ಗಿಲ್ಲದೆ ನಡೆಯುತ್ತಿದೆ.
ಇದೀಗ ಕುಟ್ರುಪ್ಪಾಡಿ ಗ್ರಾಮದ ಹೊಸಮಠ ಸೇತುವೆ ಬಳಿ ಆರು ತಿಂಗಳಿನಿಂದ ರಾತ್ರಿ ಹಗಲು ನಿರಂತರ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದು ನದಿ ತಟದಲ್ಲಿರುವ ೫ ತೆಪ್ಪಗಳು, ಅನಧಿಕೃತ ರಸ್ತೆಯ ವೀಡಿಯೋ ,ಟಿಪ್ಪರ್ ಸಹಿತ ಇತರ ವಾಹನಗಳ ಪೋಟೋ ಮತ್ತು ವೀಡಿಯೋಗಳು ಇಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ವಿಚಾರ ಜಿಲ್ಲಾಧಿಕಾರಿಗಳ ಕಚೇರಿ, ಪೊಲೀಸ್ ವರಿಷ್ಠಾಧಿಕಾರಿ, ಕಡಬದ ಕಂದಾಯ ಇಲಾಖೆ , ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದ್ದು ಸದ್ಯ ತೆಪ್ಪಗಳನ್ನು ವಶಪಡಿಸಿಕೊಳ್ಳುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಜಕೀಯ ಮುಖಂಡರೊಬ್ಬರ ಮುಂದಾಳತ್ವದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎನ್ನಲಾಗಿದೆ. ಪಕ್ಷವೊಂದರಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿಯೂ ಇದಕ್ಕೆ ಸಾಥ್ ನೀಡಿದ್ದು ತನ್ನ ಅಂಗಳವನ್ನೇ ರಸ್ತೆಯನ್ನಾಗಿ ಮಾಡಿ ಅಕ್ರಮ ಮರಳು ಸಾಗಿಸಲು ವ್ಯವಸ್ಥೆ ಕಲ್ಪಿಸಿದ್ದಾರೆ. ಇನ್ನು ನಾಡೋಳಿ, ಇಚಿಲಂಪಾಡಿ,ಬಿಳಿನೆಲೆ ವ್ಯಾಪ್ತಿಯಲ್ಲೂ ಭಾರೀ ಪ್ರಮಾಣದಲ್ಲಿ ಮರಳು ಕಳ್ಳ ಸಾಗಣೆಯಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ.ಒಂದೆಡೆ ಬಿಜೆಪಿಯಲ್ಲಿ ಗುರುತಿಸಿಕೊಂಡ ಮುಖಂಡರು ಮರಳು ತೆಗೆಯುತ್ತಿದ್ದರೆ ಮತ್ತೊಂದೆಡೆ ಕಾಂಗ್ರೆಸಿನಲ್ಲಿ ಗುರುತಿಸಿಕೊಂಡಿರುವ ಮುಖಂಡರು ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ತೆಪ್ಪ ಮುಟ್ಟುಗೋಳು ಹಾಕಲು ಮೀನಾ-ಮೇಷ ? :ಇಂದು ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಹೋಗಿದ್ದು ನದಿ ತಟದಲ್ಲಿರುವ ಐದು ತೆಪ್ಪಗಳನ್ನು ವಶಪಡಿಸಿಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದು ಇದಕ್ಕೂ ಮೀನಾ ಮೇಷ ಎಣಿಸುತ್ತಿದ್ದಾರೆಎಂಬ ಮಾತು ಕೇಳಿ ಬರುತ್ತಿದೆ. ಈ ಐದು ತೆಪ್ಪಗಳು ನಾಳೆ ಮುಂಜಾನೆಯೇ ಕಾಣೆಯಾಗುವ ಸಂಭವ ಹೆಚ್ಚಿದೆ .ತೆಪ್ಪಗಳನ್ನು ವಶಕ್ಕೆ ಪಡೆಯದಂತೆ ಅಧಿಕಾರಿಗಳಿಗೆ ರಾಜಕೀಯ ಮುಖಂಡರು ಒತ್ತಡ ಹೇರುತ್ತಿರುವ ಬಗ್ಗೆಯೂ ಸುದ್ದಿ ಹರಡಿದೆ.
ಅಧಿಕಾರಿಗಳಿಗೆ ರಾಜಕೀಯ ಮುಖಂಡರ ಒತ್ತಡ: ಪೊಲೀಸ್ ಇಲಾಖೆ ಸೇರಿದಂತೆ ಇತರ ಅಧಿಕಾರಿಗಳಿಗೆ ಒತ್ತಡ ಹೇರುತ್ತಿರುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಲಭಿಸಿದ್ದು ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಲು ಹಾಗೂ ಮುಕ್ತವಾಗಿ ಕರ್ತವ್ಯ ನಿರ್ವಹಿಸಲು ಕಷ್ಟಕರವಾಗಿದೆ . ಅಲ್ಲದೆ ಅಧಿಕಾರಿಗಳನ್ನೇ ರಾಜಕೀಯ ನಾಯಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಲಾಕ್ ಡೌನ್ ನಿಯಮ ಜಾರಿಯಲ್ಲಿರುವ ವೇಳೆ ಜನ ಸಾಮಾನ್ಯರ ವಾಹನಗಳಿಗೆ ದಂಡ ಹಾಕುವ ಅಧಿಕಾರಿಗಳು ಚೆಕ್ ಪೋಸ್ಟ್ ಮೂಲಕವೇ ರಾಜಕೀಯ ಮುಖಂಡರ ಮರಳು ಸಾಗಾಟ ಮಾಡುವ ವಾಹನಗಳನ್ನು ಯಾಕೆ ತಡೆಯುತ್ತಿಲ್ಲ ಪ್ರಶ್ನೆ ಸಾರ್ವಜನಿಕರಲ್ಲಿ ಎದ್ದಿದೆ. ಜನ ಸಾಮಾನ್ಯರಿಗೆ ಮರಳು ತೆಗೆಯಲು ಅವಕಾಶ ಇಲ್ಲವಾಗಿದ್ದು ಪ್ರಭಾವಿಗಳಿಗೆ ಮಾತ್ರ ಯಾವುದೇ ಅನುಮತಿ ಪಡೆಯದೆ ಮರಳು ತೆಗೆದು ಕೊಂಡು ಹೋಗುತ್ತಿದ್ದಾರೆ.


