ಕಡಬ ಟೈಮ್ಸ್, ಸುಳ್ಯ: ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಮದ ಶೇಣಿಯ ಕುಳ್ಳಾಜೆ ಎಂಬಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬವೊಂದು ಸ್ವಂತ ಸೂರಿಲ್ಲದೆ, ಜೀವನ ನಡೆಸುತ್ತಿದ್ದಾರೆ.
ಕುಳ್ಳಾಜೆಯ 78 ವರ್ಷ ಪ್ರಾಯದ ಮಾಣಿಕ ಮತ್ತು ಅವರ ಪತ್ನಿ ಬೊಳ್ಳೆಚ್ಚಿ ಎಂಬವರೇ ಸಂಕಷ್ಟದ ಜೀವನ ನಡೆಸುತ್ತಿರುವ ದಂಪತಿಗಳು. ಇವರ ಮೂವರು ಮಕ್ಕಳಲ್ಲಿ ಹಿರಿಯ ಮಗ ಪುತ್ತೇರ್ಯ ಮತ್ತು ಪುತ್ರಿ ಜಾನಕಿ ಅಸೌಖ್ಯದಿಂದ ನಿಧನರಾದರೆ, ಓರ್ವ ಪುತ್ರ ಮದುವೆಯಾಗಿ ಪತ್ನಿಯ ಊರಲ್ಲಿ ಜೀವನ ನಡೆಸುತ್ತಿದ್ದಾರೆ. ಮಗ ಇವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಲು ಮುಂದಾದರೂ ಇವರಿಗೆ ಈ ಜಾಗವನ್ನು ಬಿಟ್ಟು ಹೋಗಲು ಮನಸ್ಸಿಲ್ಲವಾಗಿದೆ.
ಇತ್ತೀಚೆಗೆ ಸುರಿದ ಗಾಳಿ ಮಳೆಗೆ ಇವರ ಹಂಚಿನ ಮನೆಯ ಮೇಲ್ಛಾವಣಿ ಮುರಿದು ಬಿದ್ದು, ಬಳಿಕ ಮಳೆಗೆ ಗೋಡೆ ಜರಿದು ಬಿದ್ದಿದೆ. ಕಟ್ಟಿಗೆ ಹಾಕಲೆಂದು ಕಟ್ಟಿದ ಸಣ್ಣ ಕೊಟ್ಟಿಗೆಯಲ್ಲಿ ಈಗ ವಾಸವಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ಮಾಣಿಕರಿಗೆ ಸೊಂಟದ ಕೆಳಗೆ ಬಲವಿಲ್ಲದೆ ನಡೆದಾಡಲೂ ಸಾಧ್ಯವಾಗದೆ ತೆವಳಿಕೊಂಡು ಹೋಗುತ್ತಿದ್ದಾರೆ. ಇವರ ಪತ್ನಿಗೂ ಕೂಲಿ ಮಾಡಲು ಶಕ್ತಿ ಇಲ್ಲ. ಬೊಳ್ಳೆಚ್ಚಿಯವರಿಗೆ ಸರಕಾರದಿಂದ ಸಿಗುವ 1 ಸಾವಿರ ಹಣ ಮಾಣಿಕರಿಗೆ ಔಷಧಿಗೆ ಖರ್ಚಾದರೆ ರೇಶನ್ ಅಕ್ಕಿ ಸಾಮಾಗ್ರಿಗಳಿಂದ ಜೀವನ ನಡೆಯುತ್ತಿದ್ದಾರೆ.
ಎರಡು ಎಕ್ರೆಯಷ್ಟು ಪಟ್ಟಾ ಜಾಗವಿದ್ದರೂ ಯಾವುದೇ ಕೃಷಿ ಇಲ್ಲ. ಮುರಿದು ಹೋದ ಮನೆಯನ್ನು ಪುನಃ ನಿರ್ಮಿಸಲು ಶಕ್ತಿಯೂ ಇಲ್ಲ. ಹಣವೂ ಇಲ್ಲವಾಗಿದೆ. ಆಶ್ರಯ ಯೋಜನೆಗೆ ಅರ್ಜಿ ಸಲ್ಲಿಸಿಯೂ ಪ್ರಯೋಜನವಾಗಲಿಲ್ಲ. ಈಗ ಜೀವನವೇ ಕಷ್ಟವಾಗಿದೆ. ಮನೆ ಮುರಿದು ಬಿದ್ದ ಮೇಲೆ ಕಟ್ಟಿಗೆ ಇಡುವ ಕೊಟ್ಟಿಗೆಯಲ್ಲಿ ಬದುಕುತ್ತಿದ್ದೇವೆ ಎನ್ನುತ್ತಾ ಕಣ್ಣೀರಿಡುತ್ತಿದ್ದಾರೆ ಮಾಣಿಕ, ಬೊಳ್ಳೆಚ್ಚಿ ದಂಪತಿ.
ಮೇ. 27ರಂದು ಸ್ಥಳೀಯರಾದ ವಿವೇಕ್ ರೈ ಶೇಣಿ, ಧರ್ಮಪಾಲ ಶೇಣಿ ಸೇರಿದಂತೆ ಹಲವಾರು ಸಮಾನ ಮನಸ್ಕರು ಭೇಟಿ ನೀಡಿದ ವೇಳೆ ಈ ವೃದ್ದ ದಂಪತಿಗಳ ಸಂಕಷ್ಟದ ಜೀವನ ಬೆಳಕಿಗೆ ಬಂದಿದೆ .ಮಾಧ್ಯಮ ಪ್ರತಿನಿಧಿಯೊಬ್ಬರು ಗ್ರಾಮಕರಣಿಕರಿಗೆ ತಿಳಿಸಿದ್ದು ಗ್ರಾಮ ಕರಣಿಕರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಂಬಂಧಪಟ್ಟ ಇಲಾಖೆಗೆ ವರದಿ ನೀಡುವುದಾಗಿಯೂ, ನಡೆದಾಡಲೂ ಸಾಧ್ಯವಾಗದೇ ಇರುವ ಮಾಣಿಕರಿಗೆ ವೃದ್ದಾಪ್ಯ ವೇತನಕ್ಕೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.ಇದೀಗ ಯುವಕರ ತಂಡ ದಾನಿಗಳ ಸಹಕಾರದಿಂದ ಮನೆ ನಿರ್ಮಿಸಿಕೊಡಲು ಮುಂದಾಗಿದ್ದು, ವಸ್ತು ರೂಪದ ಕೊಡುಗೆಯ ನಿರೀಕ್ಷೆಯಲ್ಲಿದ್ದಾರೆ.


