ಕಡಬ ಟೈಮ್ಸ್, ಧರ್ಮಸ್ಥಳ : ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಂದಿರುವವರಿಂದಲೇ ಕೊರೋನಾ ಪ್ರಕರಣ ಜಾಸ್ತಿಯಾಗುತ್ತಿದೆ ಎಂಬ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಕೆಲವರು ಹೆಗ್ಗಡೆ ಅವರ ಪರವಾಗಿ ವಾದಿಸುತ್ತಿದ್ದರೆ, ಮತ್ತೆ ಕೆಲವರು ವಿರುದ್ಧವಾಗಿ ವಾದಿಸುತ್ತಿರುವುದು ಕಂಡು ಬಂದಿದೆ. ಈ ನಡುವೆ ಹೇಳಿಕೆಯ ಕುರಿತು ಹೆಗ್ಗಡೆಯವರೇ ಸ್ಪಷ್ಟೀಕರಣ ನೀಡಿದ್ದಾರೆ.
ದೇವಸ್ಥಾನಗಳನ್ನು ತೆರೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿವಾಹಿನಿಯೊಂದರಲ್ಲಿ ತಮ್ಮ ಹೇಳಿಕೆಯನ್ನು ನೀಡುವ ವೇಳೆಯಲ್ಲಿ ಮಹಾರಾಷ್ಟ್ರದಿಂದ ಬಂದವರಿಂದ ಕರ್ನಾಟಕದಲ್ಲಿ ಕೊರೊನಾ ಹೆಚ್ಚಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ತಾವು ಹೇಳಿದ ಮಾತನ್ನು ಎಲ್ಲರೂ ಅರ್ಥೈಸಿಕೊಳ್ಳಲಿ ದುರುದ್ದೇಶಕ್ಕೆ ಬಳಸಬಾರದು ಎಂದಿದ್ದಾರೆ.
ಕೊರೊನಾ ವೈರಸ್ ಸೋಂಕಿನ ವಿರುದ್ದ ಧರ್ಮಸ್ಥಳ ಕ್ಷೇತ್ರ ಹಲವು ಕ್ರಮಗಳನ್ನು ಕೈಗೊಂಡಿದೆ. ಅದ್ರಲ್ಲೂ ಉದ್ಯಾವರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯನ್ನು ಕ್ವಾರಂಟೈನ್ ಗಾಗಿ ನೀಡಲಾಗಿದ್ದು, ಜಿಲ್ಲಾಸ್ಪತ್ರೆ ಇದೀಗ ಕೋವಿಡ್ ಆಸ್ಪತ್ರೆಯನ್ನಾಗಿ ನಿರ್ಧರಿಸಿದೆ. ಇನ್ನು ಧರ್ಮಸ್ಥಳದಲ್ಲಿರುವ ರಜತಾದ್ರಿ ವಸತಿ ಗೃಹದ 300 ಕೊಠಡಿಯನ್ನು ಕ್ವಾರಂಟೈನ್ ಆಗಿ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.


