ಕಡಬ ಟೈಮ್ಸ್, ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಆಕ್ಸಿಜನ್, ವೆಂಟಿಲೇಟರ್, ಐಸಿಯು ಬೆಡ್ ಗಳನ್ನು ಸಮ ರ್ಥವಾಗಿ ನಿರ್ವಹಣೆ ಮಾಡಲಾಗಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಕೆನರಾ ಬ್ಯಾಂಕ್ನ ಸಹಭಾಗಿತ್ವದಲ್ಲಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ 23 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುವ ಆಕ್ಸಿಜನ್ ಉತ್ಪಾದನಾ ಘಟಕದ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.ಪ್ರಾರಂಭದಲ್ಲಿ ರಾಜ್ಯದಲ್ಲಿ ಆಕ್ಸಿಜನ್, ವೆಂಟಿಲೇಟರ್, ಐಸಿಯು ಬೆಡ್ ಗಳ ಬಗ್ಗೆ ಚರ್ಚೆಯಾಗುತ್ತಿತ್ತು. ಆದರೆ ಇದೀಗ ಅಂತಹ ಪರಿಸ್ಥಿತಿ ಇಲ್ಲ.
ದ.ಕ. ಜಿಲ್ಲೆಯಲ್ಲಿ 7 ತಾಲೂಕಿನ 9 ಆರೋಗ್ಯ ಕೇಂದ್ರಗಳಲ್ಲಿ ಆಕ್ಸಿಜನ್ ಉತ್ಪಾದನೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಜಿಲ್ಲೆಯಲ್ಲಿಯೇ ನಿಂತು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಸಮರ್ಪಕ ಯೋಜನೆ ರೂಪಿಸಿದ್ದು ಹಾಗೂ ಜಿಲ್ಲೆಯ ಶಾಸಕರ ಕ್ರಿಯಾಶೀಲತೆಯ ಕೆಲಸವೇ ಇದಕ್ಕೆ ಕಾರಣ.
ನಮ್ಮ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಿನವಹಿ ಟೈಂ ಟೇಬಲ್ ಮಾಡಿ ವ್ಯಾಕ್ಸಿನ್ ಕೊಡುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, ಖಾಸಗಿ ಆಸ್ಪತ್ರೆಗಳ ಮುಖಾಂತರವಾಗಿ ತಾಲೂಕುಗಳನ್ನು ವಿಂಗಡಣೆ ಮಾಡಿ ಅಲ್ಲಿ ಕೊಡುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಆದಷ್ಟು ಶೀಘ್ರದಲ್ಲಿ ನಮ್ಮ ಜಿಲ್ಲೆಯ ಎಲ್ಲಾ ವ್ಯಾಕ್ಸಿನೇಷನ್‌ನ ಸಮಸ್ಯೆಯನ್ನು ಪರಿಹರಿಸುವ ಕೆಲಸವಾಗಲಿದೆ. ಎಂದು ತಿಳಿಸಿದ ನಳಿನ್ ಕುಮಾರ್ ಕಟೀಲ್ ಅವರು, ಕೊರೋನಾ ಫ್ರಂಟ್‌ಲೈನ್ ವಾರಿಯರ್ಸ್‌ಗೆ ಮೊದಲು ಲಸಿಕೆ ಕೊಡಬೇಕೆಂದು ಇದೆ. ಈ ನಿಟ್ಟಿನಲ್ಲಿ ಗ್ರಾ.ಪಂ. ಸದಸ್ಯರಿಗೆ ಲಸಿಕೆ ಕೊಡಬೇಕೆಂದು ಇಂದು ಆದೇಶವಾಗಿದ್ದು, ಎಲ್ಲರಿಗೂ ಲಸಿಕೆ ಲಭ್ಯವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನುಡಿದರು.ಈ ಸಂದರ್ಭ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪುತ್ತೂರು ಶಾಸಕ ಸಂಜೀವ ಮಠಂದೂರು ಉಪಸ್ಥಿತರಿದ್ದರು.


