ಕಡಬ ಟೈಮ್ಸ್, ಪುತ್ತೂರು: ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸಮಾಜ ಮುಖಿ ಕೆಲಸ ಮಾಡುತ್ತಿರುವ ಹಿಂದೂ ಸಂಘಟನೆಗಳ ನಾಯಕರ ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ವಿದ್ಯಮಾನ ಇದೇ ರೀತಿ ಮುಂದುವರಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕರೂ, ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರೂ ಆದ ಮುರಳಿಕೃಷ್ಣ ಹಸಂತಡ್ಕ ಎಚ್ಚರಿಸಿದ್ದಾರೆ.
ಪುತ್ತೂರು ವಿಶ್ವಹಿಂದೂ ಪರಿಷತ್ ಕಾರ್ಯಾಲಯದಲ್ಲಿ ಮಾದ್ಯಮದವರ ಜೊತೆ ಅವರು ಮಾತನಾಡಿ , ಶವ ಸಂಸ್ಕಾರ, ರಕ್ತದಾನ ಸೇರಿದಂತೆ ಸಮಾಜಮುಖಿ ಕಾರ್ಯ ಮಾಡಿರುವ ಬಜರಂಗಳ, ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾರ್ಗದರ್ಶದಲ್ಲಿ ರಾಜ್ಯ ಮತ್ತು ದೇಶದಲ್ಲಿ ಅತ್ಯಂತ ಹೆಚ್ಚಿನ ವಾಬ್ದಾರಿಯುತ ಸೇವೆ ಮಾಡುತ್ತಿದೆ. ಹಿಂದೂ ಸಂಘಟನೆಗಳು ಸೇವಾ ಭಾರತಿ ಅಶ್ರಯದಲ್ಲಿ ನಾನಾ ರೀತಿಯ ಸೇವಾ ಕಾರ್ಯಗಳನ್ನು ನೋಡಿ ವಿಕೃತ ಮನಸ್ಸುಲ್ಲವರು ಅನೇಕ ನಾಯಕರನ್ನು ಗುರಿಯಾಗಿರಿಸಿ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡುವ, ಸೇವಾ ಕಾರ್ಯದಲ್ಲಿ ತೊಡಗಿರುವವರ ಕಾಲೆಳೆಯುವ, ಮಾನಸಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ.
ಒಂದು ಘಟನೆಯಲ್ಲಿ ಕೆಲವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಇನ್ನೊಂದು ಕಡೆ ಫೇಸ್‌ಬುಕ್ ನಕಲಿ ಎಕೌಂಟ್ ಮಾಡಿಕೊಂಡು, ಗಣ್ಯರ ಖಾತೆ ಹ್ಯಾಕ್ ಮಾಡುವ, ಹಣಕ್ಕಾಗಿ ಬೇಡಿಕೆ ಇಡುವ ಕೆಲಸವೂ ನಡೆಯುತ್ತಿದೆ. ಲಾಕ್‌ಡೌನ್ ಸಮಯದಲ್ಲಿ ಕೆಲಸವಿಲ್ಲದೆ ಕುಳಿತ ಕೆಲವು ವಿಕೃತ ಮನಸುಗಳು ಮಾಡುವ ಇಂಥ ನೀಚ ಕೃತ್ಯಗಳಿಂದಾಗಿ ಸಮಾಜ ಸೇವೆಯನ್ನು ಪ್ರಾಮಾಣಿಕವಾಗಿ ನಡೆಸುವವರಿಗೆ ನೋವಾಗುತ್ತದೆ. ದುರ್ಗಾವಾಹಿನಿ ಸಂಘಟನೆಯನ್ನು ಎಳೆದು ತಂದು ಮಾನಹಾನಿ ಮಾಡುವ ಪ್ರಯತ್ನವೂ ಸೋಷಿಯಲ್ ಮೀಡಿಯಾ ಮೂಲಕ ನಡೆದಿದೆ. ಇಂಥವರು ಇನ್ನಾದರೂ ಈ ಕೆಲಸ ಬಿಟ್ಟು ಸಾಧ್ಯವಾದರೆ ಸಮಾಜಕ್ಕೆ ನೆರವಾಗುವಂಥ ಕೆಲಸ ಮಾಡಿ. ಇಲ್ಲದಿದ್ದರೆ ಸುಮ್ಮನಿರಿ. ಬಜರಂಗದಳ ಇದನ್ನೆಲ್ಲ ನೋಡಿ ಸುಮ್ಮನಿರುತ್ತದೆ ಎಂದು ಭಾವಿಸಬೇಡಿ ಎಂದವರು ಎಚ್ಚರಿಸಿದರು.


